ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಸುಳ್ಯದಲ್ಲಿ ಮೇಳೈಸುತ್ತಿರುವ ಯಕ್ಷ ಸಂಭ್ರಮ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಒಕ್ಟೋಬರ್ 20 , 2013
ಪ್ರತಿದಿನ ಮೂರ್ನಾಲ್ಕು ಪ್ರಸಂಗಗಳ ಪ್ರದರ್ಶನ. ಪಾತ್ರದ ಬಗ್ಗೆ ಉಪನ್ಯಾಸ, ಅಗಲಿದ ಯಕ್ಷ ದಿಗ್ಗಜರ ಸಂಸ್ಮರಣೆ, ಮುಖವರ್ಣಿಕೆ ವಿವರಣೆ, ಪ್ರಸಿದ್ಧ ಯಕ್ಷ ಕಲಾವಿದರ ಸಮಾಗಮ. ಇದು ಅ. 27ರವರೆಗೆ ಸುಳ್ಯದ ಸ್ನೇಹ ಶಾಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ರಾಜ್ಯ ಮಟ್ಟದ ಕಾರ್ಯಗಾರದ ಸಾರಾಂಶ.

ಅ. 17ರಿಂದ ಕಾರ್ಯಾಗಾರ ನಡೆಯುತ್ತಿದೆ. ಪ್ರತಿದಿನ ರಾತ್ರಿ 10 ಗಂಟೆಯವರೆಗೆ ಪ್ರದರ್ಶನ. ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ.

11 ದಿನಗಳಲ್ಲಿ 25 ಯಕ್ಷ ಕಲಾವಿದ ವಿಮರ್ಶಕರಿಂದ ಪಾತ್ರಗಳ ಉಪನ್ಯಾಸ, 8 ಭಾಗವತರಿಂದ ಶುಶ್ರಾವ್ಯ ಭಾಗವತಿಕೆ, 25 ಮಂದಿ ಪ್ರಸಿದ್ಧ ಕಲಾವಿದರಿಂದ ಚೆಂಡೆ-ಮದ್ದಳೆ ವಾದನ. 6 ಕಲಾವಿದರಿಂದ ಹಾಸ್ಯದ ಹೊನಲು, 12 ಸ್ತ್ರೀವೇಷಧಾರಿಗಳಿಂದ ನಾಟ್ಯ ವೈಯಾರ, 55 ಪ್ರಸಿದ್ಧ ಕಲಾವಿದರಿಂದ ಯಕ್ಷಗಾನದ ನಾಟ್ಯ ವೈಭವ, ಅರ್ಥಗಾರಿಕೆಯ ಅನಾವರಣ. ಇವೆಲ್ವೂ ಯಕ್ಷಗಾನದ ಮೂಲ ಚೌಕಟ್ಟಿನಲ್ಲಿಯೇ ವೈಭವಗೊಳ್ಳುತ್ತದೆ. ದ.ಕ, ಉಡುಪಿ, ಕಾಸರಗೋಡು ಭಾಗದಿಂದಲೂ ಯಕ್ಷ ಪ್ರಿಯರು ಆಗಮಿಸಿ ಕಲಾ ಸವಿ ಉಣುತ್ತಿದ್ದಾರೆ.

ಬಲಿಪ ಭಾಗವತರ ನೇತೃತ್ವ: ಅಚ್ಚ ಕನ್ನಡ ಬಳಕೆಯಾಗುತ್ತಿರುವ ಒಂದು ಕಲಾ ಪ್ರಕಾರ ಅಂದರೆ ಅದು ಯಕ್ಷಗಾನ. ಆದುದರಿಂದ ಕನ್ನಡದ ಮೂಲವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದೆ. ಆದುದರಿಂದ ಈ ಕಾರ್ಯಾಗಾರ ಯಕ್ಷಗಾನದ ಪಾರಂಪರಿಕ ಕೊಂಡಿ ಎನಿಸಿರುವ ಹಿರಿಯ ಯಕ್ಷಗಾನ ಭಾಗವತ ಬಲಿಪ ಭಾಗವತರ ನಿರ್ದೇಶನದಲ್ಲಿ ನಡೆಯುತ್ತಿದೆ. ಬಲಿಪರು 11 ದಿನಗಳ ಕಾಲವೂ ಎಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಾಗಾರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಪರಂಪರೆ ನೃತ್ಯ, ಮುಖವರ್ಣಿಕೆಯಲ್ಲಿ ಅಥವಾ ಇತರ ಯಾವುದೇ ವಿಷಯದಲ್ಲಿ ವ್ಯತ್ಯಾಸ, ಸಂಶಯಗಳು ಬಂದಲ್ಲಿ ಬಲಿಪರ ಮುಂದೆ ಕಲಾವಿದರು ಮಂಡಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ.

ಸಂಪೂರ್ಣ ದಾಖಲೀಕರಣ: ನಿರಂತರ ನಡೆಯುವ ಕಾರ್ಯಾಗಾರ ದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮ ಮತ್ತು ಪ್ರದರ್ಶನಗಳ ದಾಖ ಲೀಕರಣ ಮಾಡಲಾಗುತ್ತದೆ. ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮತ್ತು ಅದನ್ನು ಮುಂದಿನ ಹಂತದಲ್ಲಿ ಅಧ್ಯಯನಕ್ಕೂ ಅವಕಾಶ ಮಾಡುವ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುತ್ತದೆ.

ನಮ್ಮ ನಿರೀಕ್ಷೆಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯಾಗಾರ ನಡೆಯುತ್ತಿದೆ. ಈ ಪ್ರಯೋಗ ಇದುವೇ ಪ್ರಥಮ. ಎಲ್ಲ ಕಲಾವಿದರು ಸೇರಿ ಸಮಾಲೋಚಿಸಿ ಪರಂಪರೆ ಕೊಂಡಿಯನ್ನು ಮುಂದಿನ ತಲೆಮಾರಿಗೆ ಕೊಂಡುಹೋಗುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳುತ್ತೇನೆ. - ಬಲಿಪ ನಾರಾಯಣ ಭಾಗವತರು

ಕಾರ್ಯಾಗಾರ ಯಶಸ್ವಿಯಾಗಿ ನಡೆಯುತ್ತಿದೆ. ಆಹ್ವಾನಿಸಿರುವ ಎಲ್ಲ ಕಲಾವಿದರು, ಉಪನ್ಯಾಸಕರು ಉತ್ಸುಕರಾಗಿ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ಯಕ್ಷ ಸಂಭ್ರಮದ ಅನಾವರಣ ಇಲ್ಲಿ ನಿರಂತರ ಆಗುತ್ತದೆ. - ಡಾ. ಚಂದ್ರಶೇಖರ ದಾಮ್ಲೆ , ಪ್ರಧಾನ ಕಾರ್ಯಕ್ರಮ ಸಂಯೋಜಕ




ಕಾರ್ಯಾಗಾರದ ಎರಡನೆಯ ದಿನ (18-10-2013) ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆಯಲ್ಲಿ ಭೀಷ್ಮೋತ್ಪತ್ತಿ ಹಾಗೂ ಭೀಷ್ಮ ಪ್ರತಿಜ್ಞೆ ಯಕ್ಷಗಾನ ಪ್ರಸಂಗ ಪ್ರದರ್ಶನವು ಅಪರಾಹ್ನ 02:00 ರಿಂದ 05:00ರವರೆಗೆ ಜರುಗಿತು. ಶಂತನು ಪಾತ್ರದಲ್ಲಿ ಶ್ರೀ ಸಂಪಾಜೆ ಶೀನಪ್ಪ ರೈ, ಚಿತ್ರಾಂಗದನ ಪಾತ್ರದಲ್ಲಿ ಉಬರಡ್ಕ ಉಮೇಶ ಶೆಟ್ಟಿ, ಗಂಗೆಯ ಪಾತ್ರದಲ್ಲಿ ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ, ಸತ್ಯವತಿಯ ಪಾತ್ರದಲ್ಲಿ ಶ್ರೀ ರವಿ ಅಲೆವೂರಾಯ, ದಾಶರಾಜನ ಪಾತ್ರದಲ್ಲಿ ಶ್ರೀ ರವಿಶಂಕರ ವಳಕ್ಕುಂಜ ಮಿಂಚಿದರು.

ಯು. ಸುಬ್ರಾಯ ಗೌಡ ಅವರು, ಶ್ರೀಮಾನ್ ಕೊಳಂಬೆ ಪುಟ್ಟಣ್ಣ ಗೌಡರ ಸಂಸ್ಮರಣೆ ಮಾಡಿದರು. ನಂತರ ಕನ್ನಡ ಕಾವ್ಯಗಳಲ್ಲಿ ಪೌರಾಣಿಕ ಪಾತ್ರ ಚಿಂತನೆ ಎಂಬುದರ ಬಗ್ಗೆ ಎಸ್ ವಿ ಎಸ್ ಕಾಲೇಜು ಬಂಟ್ವಾಳ ಇದರ ಕನ್ನಡ ಉಪನ್ಯಾಸಕಿ, ಯಕ್ಷಗಾನ ಸಂಶೋಧಕಿ ಡಾ| ನಾಗವೇಣಿ ಮಂಚಿಯವರು “ಭೀಷ್ಮನ ಒಳ-ಹೊರಗು” ಎಂಬ ವಿಷಯದ ಕುರಿತು ಮಾತನಾಡಿದರು, ಮಹಾಭಾರತದಲ್ಲಿ ಭೀಷ್ಮನ ಪಾತ್ರ ಮಹತ್ವದ್ದು. ಭೀಷ್ಮನ ಪಾತ್ರಗಳು ಮತ್ತೆ ಮತ್ತೆ ನಮ್ಮ ಕಣ್ಣ ಮುಂದೆ ಬರಬೇಕು. ಭೀಷ್ಮನ ಪಾತ್ರಗಳಲ್ಲಿ ಒಳ ಅರಿವು ಇತ್ತು ಎಂದರು. ಯಕ್ಷಗಾನವು ಕುಮಾರವ್ಯಾಸನ ಮಹಾಭಾರತ ಕಾವ್ಯಗಳ ಆಧಾರಿತವಾಗಿವೆ. ಆದರೆ ಪಾತ್ರಗಳ ನಿಜ ಸ್ವರೂಪ ತಿಳಿಯಲು ಕನ್ನಡದ “ಪಂಪ ಭಾರತ” ಅತ್ಯುತ್ತಮವಾಗಿದೆ ಎಂದು ನುಡಿದರು. ಅಲ್ಲದೆ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಕೆ. ಎಸ್. ಕಲ್ಲೂರಾಯ, ಅಧ್ಯಕ್ಷರು , ಶ್ರೀಕೃಷ್ಣ ಯಕ್ಷ ಸಭಾ ಮಂಗಳೂರು ಇವರು ಭಾಗವಹಿಸಿದ್ದರು.

ಸಂಜೆ 06:30ರಿಂದ ರಾತ್ರಿ 09:30ರವರೆಗೆ ಭೀಷ್ಮ ವಿಜಯ ಯಕ್ಷಗಾನ ಪ್ರಸಂಗ ನಡೆಯಿತು. ಮುಮ್ಮೇಳದಲ್ಲಿ ಭೀಷ್ಮನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಪರಶುರಾಮನಾಗಿ ಸೂರಿಕುಮೇರು ಗೋವಿಂದ ಭಟ್ , ಕಾಶೀರಾಜ ಪ್ರತಾಪಸೇನನ ಪಾತ್ರದಲ್ಲಿ ರೆಂಜಾಳ ರಾಮಕೃಷ್ಣ ರಾವ್, ಅಂಬೆಯ ಪಾತ್ರದಲ್ಲಿ ಈಶ್ವರ ಪ್ರಸಾದ್ ಧರ್ಮಸ್ಥಳ, ಸಾಲ್ವನ ಪಾತ್ರದಲ್ಲಿ ಸದಾಶಿವ ಶೆಟ್ಟಿಗಾರ್ ಅಲ್ಲದೇ ವೃದ್ಧ ಬ್ರಾಹ್ಮಣನ ಪಾತ್ರದಲ್ಲಿ ರವಿಶಂಕರ ವಳಕ್ಕುಂಜ ಅವರು ಮೆರುಗು ತಂದರು.

ಶನಿವಾರ ತುದಿಯಡ್ಕ ವಿಷ್ಣ್ವಯ್ಯ ವೇದಿಕೆಯಲ್ಲಿ ಪರೀಕ್ಷಾ ರಂಗ – ದ್ರುಪದ ಗರ್ವಭಂಗ ಹಾಗೂ ಅರಗಿನಾಲಯ – ಹಿಡಿಂಬಾ ವಿವಾಹ ಬಕಾಸುರ ವಧೆ ಯಕ್ಷಗಾನ ಪ್ರದರ್ಶನ.

ಎರಡನೆಯ ದಿನದ ಕೆಲವು ಭಾವಚಿತ್ರಗಳು









ಕೃಪೆ : http://www.vijaykarnataka.indiatimes.com , http://snehaschool.wordpress.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ